Saturday, March 29, 2014

ಮಾತೃಭಾಷೆಯ ಮಹತ್ವ!

ಮಾತೃಭಾಷೆ ಮುಖ್ಯವೇ? ಮಕ್ಕಳಿಗೆ ಅದನ್ನು ಸಣ್ಣದರಲ್ಲೇ ಕಲಿಸಬೇಕೇ? ಇತ್ತೀಚೆಗೆ ಮುಂದೆ ಬರುವ ಅವಕಾಶಗಳಿಗೆ ನಮ್ಮ ಮಕ್ಕಳು ತಯಾರಾಗಿರಲಿ ಅಂತ ಹೇಳಿ ನಾವು ಇಂಗ್ಲೀಶ್, ಹಿಂದಿ, ಸ್ಪ್ಯಾನಿಶ್, ಫ್ರೆಂಚ್ ಎಲ್ಲ ಭಾಷೆಗಳನ್ನು ಮಕ್ಕಳು ಕಲಿಯಲಿ ಅಂತ ಬಯಸುತ್ತೇವೆ. ಆದರೆ ಮಾತೃಭಾಷೆ ಕಲಿಯಲಿ ಎಂದು ಅದೇ ತೀವ್ರತೆಯಿಂದ ಯೋಚಿಸುತ್ತೇವೆಯೇ? ನಾವು ಅಭಯನಿಗೆ ಎರಡನೇ ಭಾಷೆಯಾಗಿ ಕನ್ನಡ ಕೊಡಿಸಿದೆವು. ಬಹಳ ಜನ ಹಿಂದಿ ಯಾಕೆ ಕೊಡಿಸಲಿಲ್ಲ ಅಂತ ಕೇಳಿದರು. ನನ್ನ ಮತ್ತು ನನ್ನ ಗಂಡನ ಪ್ರಕಾರ, ಕನ್ನಡ ಕಲಿಯುವುದು ಬಹಳ ಮುಖ್ಯ. ನಾವು ಪ್ರಪಂಚದ ಎಲ್ಲ ವಿಷಯಗಳನ್ನು ತಿಳಿದುಕೊಂಡಿರಬಹುದು. ಆದರೆ ನಮ್ಮ ಮನೆಯ ಬಗ್ಗೆ ನಮಗೆ ಗೊತ್ತಿರದಿದ್ದರೆ ನಮ್ಮ ಜ್ಞಾನ ಅಪೂರ್ಣ. ನಮ್ಮಲ್ಲೇನಿದೆ ಅಂತ ತಿಳಿದುಕೊಳ್ಳದೆ ಬೇರೆಲ್ಲ ಕಡೆ ಏನಿದೆ ಅಂತ ಪೂರ್ತಿಯಾಗಿ ಅರಿತುಕೊಳ್ಳಲು ಆಗುವುದಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ, ನಮ್ಮತನ ವ್ಯಕ್ತವಾಗುವುದಕ್ಕೆ ನಮ್ಮ ಭಾಷೆ ಬೇಕೇ ಬೇಕಲ್ಲವೇ?
 
 
 
ಇವತ್ತಿನ ಬ್ಲಾಗಿನ ವಿಷಯ "ರೀಡಿಂಗ್ ಇನ್ ನೇಟಿವ್ ಲ್ಯಾಂಗ್ವೇಜ್". ನಮ್ಮ ನೇಟಿವ್ ಲ್ಯಾಂಗ್ವೇಜ್ ಕನ್ನಡ. ಹಾಗಾಗಿ ನಾನು ಕನ್ನಡದಲ್ಲೇ ಇಂದಿನ ಬ್ಲಾಗನ್ನು ಬರೆಯೋಣ ಅಂತ ಯೋಚನೆ ಮಾಡಿದೆ. ನಾನು ಮೆಂಬರಾಗಿ ಇರುವ ಗ್ರಂಥಾಲಯಗಳಲ್ಲಿ ಸಿಗುವ ಮಕ್ಕಳ ಪುಸ್ತಕಗಳೆಲ್ಲಾ ಇಂಗ್ಲಿಷಿನಲ್ಲಿ ಇರುತ್ತವೆ. ಅದಕ್ಕೆ ನೆನ್ನೆ ಸಪ್ನ ಬುಕ್ ಹೌಸಿಗೆ ಹೋಗಿ ಕರ್ನಾಟಕ ಬುಕ್ ಏಜೆನ್ಸಿ ಪ್ರಕಟಿಸಿರುವ "ನೀತಿ ಕಥಾ ಮಾಲೆ" ಎಂಬ ಸರಣಿ ಪುಸ್ತಕಗಳನ್ನ ಕೊಂಡು ತಂದೆ. ಕನ್ನಡದ ಮಕ್ಕಳ ಕಥೆಗಳಲ್ಲಿ ಹೆಚ್ಚಾಗಿ ನೀತಿ ಇರಲೇ ಬೇಕು. ಪುಸ್ತಗಗಳಲ್ಲಿ ಚಿಕ್ಕದಾದ ಆದರೆ ಸುಂದರವಾದ ಕಥೆಗಳು ಇವೆ. ಇದರಲ್ಲಿ ಕೆಲವು ನಾನು ಚಿಕ್ಕವಳಾಗಿದ್ದಾಗ ಕೇಳಿದ್ದೆ. ಒಂದು ಕಥೆಯಲ್ಲಿ ಒಂದು ನಾಯಿ ಕುದುರೆಗಳ ಲಾಯಕ್ಕೆ ಹೋಗಿ ಅವುಗಳ ಮೇವು ತುಂಬಿಸುವ ಬಾನಿಯಲ್ಲಿ ಮಲಗುತ್ತದೆ. ಕುದುರೆಗಳು ದಿನದ ಕೆಲಸ ಮುಗಿಸಿ ಬಂದಾಗ ಅವುಗಳಿಗೆ ತಿನ್ನಲು ಬಿಡುವುದಿಲ್ಲ. ಕುದುರೆಗಳು ಯಾಕೆ ಹೀಗೆ ಸಣ್ಣ ಬುದ್ಧಿ ತೋರಿಸುತ್ತಿರುವೆ ಎಂದು ಕೇಳಿದರೂ ತನ್ನ ಹಠ ಬಿಡುವುದಿಲ್ಲ. ಕಡೆಗೆ ಯಜಮಾನ ಬಂದು ದೊಣ್ಣೆಯಿಂದ ನಾಯಿಗೆ ಬಾರಿಸುತ್ತಾನೆ. ಆವಾಗ ಅದು ನಾನು ಮೊದಲೇ ಸರಿಯಾಗಿ ನಡೆದುಕೊಳ್ಳಬೇಕಿತ್ತು ಅಂತ ಹೇಳುತ್ತದೆ. ಇನ್ನೊಂದು ಕಥೆಯಲ್ಲಿ ಮೊಲಗಳೆಲ್ಲ ಒಂದು ಸಭೆ ಮಾಡಿ, "ಎಲ್ಲರೂ ನಮಗೆ ತೊಂದರೆ ಕೊಡುತ್ತಾರೆ, ಕೊಲ್ಲುತ್ತಾರೆ. ಆದ್ದರಿಂದ ನಾವೆಲ್ಲರೂ ನದಿಗೆ ಹಾರಿ ಪ್ರಾಣ ಬಿಡೋಣ" ಎಂದು ತೀರ್ಮಾನ ಮಾಡುತ್ತವೆ. ಹಾಗೆ ನದಿಯ ದಡಕ್ಕೆ ಹೋದಾಗ ಬಿಸಿಲು ಕಾಯಿಸಿಕೊಳ್ಳುತ್ತಿದ್ದ ಕಪ್ಪೆಗಳು ಗಾಬರಿಯಾಗಿ ನದಿಗೆ ಜಿಗಿದು ಅವಿತುಕೊಳ್ಳುತ್ತವೆ. ಆಗ ಒಂದು ವಯಸ್ಸಾದ ಮೊಲ ಎಲ್ಲರಿಗೂ ಕೂಗಿ ಹೇಳುತ್ತದೆ - "ತಡೆಯಿರಿ. ಸಾಯುವ ಯೋಚನೆ ಬಿಡಿ. ನಮಗೆ ಹೆದರುವ ಪ್ರಾಣಿಗಳೂ ಇವೆಯೆಂದಾಯಿತು. ಅವುಗಳೇ ಆತ್ಮಹತ್ಯೆ ಮಾಡಿಕೊಳ್ಳದಿದ್ದ ಮೇಲೆ ನಾವೇಕೆ ಮಾಡಿಕೊಳ್ಳಬೇಕು"?
 
ನಿಮ್ಮ ಮಾತೃಭಾಷೆ ಯಾವುದೇ ಆಗಿರಲಿ, ನಿಮ್ಮ ಮಕ್ಕಳಿಗೆ ಕಲಿಸಿ. ಅದು ಖಂಡಿತ ಅವರ ವ್ಯಕ್ತಿತ್ವವನ್ನು ರೂಪಿಸುವುದರಲ್ಲಿ ದೊಡ್ಡ ಪಾತ್ರ ವಹಿಸುತ್ತದೆ. ನಾನು ಕನ್ನಡದವಳಾಗಿ ಉಳಿದ ಕನ್ನಡಿಗರಿಗೆ ಹೇಳುತ್ತೇನೆ - "ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು"
 
 

No comments:

Post a Comment